ಎಲ್ಬ: ಇಟಲಿಯ ಪಶ್ಚಿಮ ತೀರದಲ್ಲಿರುವ ಒಂದು ದ್ವೀಪ. ಟಸ್ಕನಿ ಪ್ರದೇಶದ ಲೆಗ್ಹಾರನಿನ ಒಂದು ಭಾಗ. ವಿಸ್ತೀರ್ಣ 138.40358 ಕಿಮೀ. ಜನಸಂಖ್ಯೆ 31,572 (2009). ಪಶ್ಚಿಮ ಭಾಗದಲ್ಲಿ ಅಭ್ರಕ, ಪ್ರಶಸ್ತ ಬೆಣಚುಕಲ್ಲು ಮತ್ತು ಸುಣ್ಣಕಲ್ಲಿನ ನಿಕ್ಷೇಪಗಳೂ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಳೂ ಇವೆ.
ಇಲ್ಲಿಯ ಹಿತಕರವಾದ ವಾತಾವರಣದಿಂದಾಗಿ ಎಲ್ಲ ರೀತಿಯ ಸಸ್ಯವರ್ಗ ಬೆಳೆಯಲು ಅನುಕೂಲವಾಗಿದೆ. ಆಲಿವ್ ಮರಗಳು, ದ್ರಾಕ್ಷಿ ಬಳ್ಳಿಗಳು ಹೇರಳ. ಇಲ್ಲಿಯ ಕಬ್ಬಿಣದ ಅದಿರಿಗೆ ಇಟ್ರುಸ್ಕನ್ ಸಂಸ್ಕೃತಿಯ ಅವಶೇಷಗಳ ಹೋಲಿಕೆಯಿರುವುದರಿಂದ ಎಲ್ಬ ಆ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತೆಂದು ಊಹೆ. ಮಧ್ಯಯುಗದಲ್ಲಿ ಇದನ್ನು ಪೀಸó ಜನ ಆಳುತ್ತಿದ್ದರು. ಇದು 1399ರಲ್ಲಿ ಪಿಯಾಂಬಿನೋದ ಡ್ಯೂಕರ ಕೈಯಲ್ಲೂ 1548ರಲ್ಲಿ ಫ್ಲಾರೆನ್ಸಿನ ಒಂದನೆಯ ಕಾಸಿವೊ ಕ್ಯೆಯಲ್ಲೂ 1595-1709ವರೆಗೆ ಸ್ಪೇನಿನ ವಶದಲ್ಲೂ ಇದ್ದು ಅನಂತರ ನೇಪಲ್ಸಿನವರ ಅಧೀನಕ್ಕೆ ಬಂತು. 1802ರಲ್ಲಿ ಇದನ್ನು ಫ್ರಾನ್ಸ್‌ ಗೆದ್ದಿತು. 1814ರಲ್ಲಿ ಒಂದನೆಯ ನೆಪೋಲಿಯನ್ ರಾಜ್ಯಭ್ರಷ್ಟನಾಗಿ ಎಲ್ಬಕ್ಕೆ ಬಂದ. ಅನಂತರ ಇದೊಂದು ಸ್ವತಂತ್ರ ಸಂಸ್ಥಾನವಾಗಿ ಪರಿವರ್ತನೆ ಹೊಂದಿತು. ನೆಪೋಲಿಯನ್ನನೇ ಇದರ ರಾಜ್ಯಸೂತ್ರಗಳನ್ನು ನಡೆಸುತ್ತಿದ್ದ. ಅವನ ಅನಂತರ 1860ರಲ್ಲಿ ಇದು ಮತ್ತೆ ಇಟಲಿಯ ವಶವಾಯಿತು.
 ಪಾರ್ಟೊಫೇರ್ರಾಯೋ ಮುಖ್ಯ ಪಟ್ಟಣ ಹಾಗೂ ಬಂದರು. ಇದು ನೆಪೋಲಿಯನ್ನನ ಮುಖ್ಯ ಠಾಣ್ಯವಲ್ಲದೆ ಅವನ ಬೇಸಗೆಯ ತಂಗುದಾಣವೂ ಆಗಿತ್ತು. ಆತ ಬಳಸುತ್ತಿದ್ದ ಕಟ್ಟಡಗಳೂ ಸುಂದರವಾದ ಚಿತ್ರಗಳ ಶಾಲೆಯೂ ಇಲ್ಲಿವೆ.     *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ